Sunday, 15 March 2015

ಲೇಖಕ ಅವಿಜಿತ್ ರಾಯ್ ಹತ್ಯೆಯಾದಾಗ ಹೋದರೆಲ್ಲಿ ಚಾರ್ಲಿ ಹೆಬ್ಡೋ 'ಓ'ರಾಟಗಾರರು? -ಚಿರಂಜೀವಿ ಭಟ್

  
  ಅಂದು ಫೆಬ್ರವರಿ 26.. ಡಾ.ಅವಿಜಿತ್ ರಾಯ್ ಪತ್ನಿಯೊಡನೆ "ಬಾಯ್" ಪುಸ್ತಕ ಸಂತೆಗೆ ಬಂದಿದ್ದರು. ತಮಗಿಷ್ಟವಾದ ಪುಸ್ತಕಗಳನ್ನು ಖರೀದಿಸಿ ಸುಮಾರು ರಾತ್ರಿ 8.30ರ ವೇಳೆ, ಮನೆಗೆ ಹೊರಡಲು ಆಟೋ ರಿಕ್ಷಾ ಹತ್ತಿದ್ದರು ಅಷ್ಟೇ. ಯಮದೂತರು ಎಲ್ಲಿದ್ದರೋ ಗೊತ್ತಿಲ್ಲ. 10ಜನರ ಗುಂಪೊಂದು ಏಕಾಏಕಿ ಬಂದು, ಅವಿಜಿತ್ ಮತ್ತು ಪತ್ನಿ ರಫೀದಾಳನ್ನು ಆಟೋದಿಂದ ದರದರನೆ ಕೆಳಗಿಳಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿತು. ಆ ಆಕ್ರಮಣ ಎಷ್ಟು ಘೋರವಾಗಿತ್ತೆಂದರೆ, ಅಲ್ಲಿದ್ದ ಜನರೂ ಒಮ್ಮೆ ನಡುಗಿ ಹೋಗಿದ್ದರು. ಅವರೆಲ್ಲರಿಗೂ ಅವಿಜಿತ್ ರಾಯ್‍ನ ಆ ಉಗ್ರರಿಂದ ಬಿಡಿಸುವುದಿರಲಿ, ನೋಡುವ ತಾಕತ್ತೇ ಇರಲಿಲ್ಲ. ನೀವು ನಂಬುವುದಿಲ್ಲ, ದಂಪತಿಯ ಮೇಲೆ ಅಷ್ಟು ಆಕ್ರಮಣ ಮಾಡುತ್ತಿದ್ದಾಗ ಪೊಲೀಸರು, ಅವರಿಂದ 10ಅಡಿ ದೂರದಲ್ಲಿದ್ದರು ಅಷ್ಟೆ. ಆ ದೇಶದ ಪೊಲೀಸರೇ ಬೆಚ್ಚಿ, ನಮ್ಮ ಜೀವ ಉಳಿದರೆ ಸಾಕಪ್ಪಾ ಎಂದು ಘಟನೆ ಕಂಡರೂ, ಅಲ್ಲಿದ್ದ ಕಾರಿನ ಹಿಂದೆ ಬಚ್ಚಿಟ್ಟುಕೊಂಡು, ಕಡೆಗೆ ತಮಗೆ ಗೊತ್ತೇ ಇಲ್ಲವೇನೋ ಎಂಬಂತೆ ಬಂದರು ಎಂದು ಅಲ್ಲಿನ ಜನರೇ ಪ್ರಖ್ಯಾತ ಪತ್ರಿಕೆಗಳಿಗೆ ಹೇಳಿದ್ದಾರೆ. ಅನ್ಸಾರ್ ಬಾಂಗ್ಲಾ-7, ಎಂಬ ಇಸ್ಲಾಮಿಕ್ ಉಗ್ರರ ಆಕ್ರಮಣಕ್ಕೆ ಅವಿಜಿತ್ ರಾಯ್ ಎಂಬ ಒಬ್ಬ ಅದ್ಭುತ ಬರಹಗಾರ ಹೀನಾಯವಾಗಿ ಬಾಂಗ್ಲಾದೇಶದ ಫುಟ್‍ಪಾತ್‍ನಲ್ಲಿ ಸತ್ತು ಬಿದ್ದಿದ್ದ. ಇನ್ನು ಆತನ ಹೆಣದ ಮುಂದೆ ನಿಂತಿರುವ ಹೆಂಡತಿಯ ಮನಸ್ಥಿತಿ ಹೇಗಿರಬೇಡ? ಒಮ್ಮೆ ಆಲೋಚಿಸಿ, ನಾವು ರಸ್ತೆಯಲ್ಲಿ ಹೋಗುವಾಗ ತೆಲೆ ಸುತ್ತಿ ಬಿದ್ದರೋ ಅಥವಾ ಅಪಘಾತವಗಿ ಬಿದ್ದಾಗ ಯಾರೊಬ್ಬರೂ ನಮ್ಮ ಸಹಾಯಕ್ಕೆ ಬರದಾಗ ಜೀವನವೇ ಬೇಡವೆನಿಸುತ್ತದೆ. ಆದರೆ ಇಲ್ಲಿ, ಎರಡು ನಿಮಿಷದ ಹಿಂದಷ್ಟೇ ಖುಷಿಯಿಂದ ಮಾತನಾಡುತ್ತಿದ್ದ ಗಂಡನನ್ನು ಉಗ್ರಗಾಮಿಗಳು ಕಣ್ಣು ಮುಂದೆಯೇ ಕೊಚ್ಚಿ ಕೊಲೆಮಾಡಿ, ಫುಟ್‍ಪಾತ್ ಮೇಲೆ ಹಾಕಿ ಹೋದಾಗ, ಪತ್ನಿಯಾದವಳ ಮನಸ್ಸಿಗೆ ಅದೆಷ್ಟು ಆಘಾತವಾಗಿರಬಹುದು? ಅಲ್ಲಿದ್ದ ಜನರೇ ಹೇಳುವಂತೆ, ಆಕೆಯ ಮೇಲೂ ಉಗ್ರಗಾಮಿಗಳು ದಾಳಿ ಮಾಡಿ, ಕೊಲೆಯೊಂದು ಮಾಡದೇ ಬಿಟ್ಟು ಹೋಗಿದ್ದರು. ಆಕೆಯ ಮೈತುಂಬಾ ರಕ್ತವಾಗಿ ಗುರುತೇ ಸಿಗದಂತಾಗಿದ್ದರೂ, "ಆಮಾರ ಸ್ಬಾಮೀ ಸಾಹಾಯ್ಯ ಕರುನ(ನನ್ನ ಗಂಡನನ್ನು ರಕ್ಷಿಸಿ)" ಎಂದು ಆಕೆ ರಸ್ತೆಯ ಮಧ್ಯದಲ್ಲಿ ಕಂಡ ಕಂಡವರ ಪಾದಕ್ಕೆ ಬೀಳುತ್ತಿದ್ದಾಗ ಒಬ್ಬನೂ ಸಹಾಯ ಮಾಡಲು ಬರಲಿಲ್ಲ. ಆಕೆಗದು ಅಕ್ಷರಶಃ ನರಕವಾಗಿತ್ತು. ತನ್ನ ಜೀವ ರಕ್ಷಿಸಿಕೊಳ್ಳುವುದೋ ಫುಟ್‍ಪಾತ್ ಮೇಲೆ ಬಿದ್ದಿರುವ ಗಂಡನನ್ನು ಉಳಿಸಿಕೊಳ್ಳುವುದೋ? ದುರದೃಷ್ಟವೇನು ಗೊತ್ತಾ? ಅಲ್ಲಿದ್ದವರೆಲ್ಲರೂ ಫೋಟೊ ತೆಗೆಯುತ್ತಿದ್ದರೇ ಹೊರತು ಒಬ್ಬನೂ ಆ ಮುಗ್ದ ಹೆಣ್ಣು ಮಗಳು ರಫೀದಾ ಅಹ್ಮದ್‍ಳ ಕೂಗಿಗೆ ಸ್ಪಂಧಿಸಲೇ ಇಲ್ಲ. ಕೊನೆಗೆ ಆ ನೋವಿನಲ್ಲೂ ಆಕೆ ಗಂಡನನ್ನು ಎತ್ತಲು ಮುಂದಾದಾಗ ತಿಳಿದಿದ್ದು ಅವಿಜಿತ್ ಉಸಿರಾಡುತ್ತಿಲ್ಲ ಎಂದು. ಆ ಆಘಾತವನ್ನು ತಡೆಯಲಾಗದೆ, ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಅಲ್ಲೇ ಕುಸಿದು ಬಿದ್ದಳು. ಅಲ್ಲಿದ್ದ ಜನರಿಗೆ ನಾವು ಈಗಲಾದರೂ ಸಹಾಯಮಾಡಬೇಕೆಂದು ಜ್ಞಾನೋದಯವಾಗಿ ಒಬ್ಬೊಬ್ಬರೆ ಸಹಾಯ ಮಾಡುವುದಕ್ಕೆ ಬಂದರು

ಇದು ಯಾವದೋ ಸಿನಿಮಾ ಕಥೆಯಲ್ಲ. ಬಾಂಗ್ಲಾದೇಶದಲ್ಲಿ ಬೆಂಗಾಲಿ ಭಾಷೆಯನ್ನು ಉಳಿಸ ಹೊರಟ, ಧರ್ಮ ಜಾತಿಗಳೆಂಬುದೆಲ್ಲ ಸುಳ್ಳು, ಮಾನವ ಕುಲವೇ ಒಂದು ಧರ್ಮ ಎಂದು ಪ್ರಖರವಾಗಿ ಬರೆಯುತ್ತಿದ್ದವನೊಬ್ಬ ಫುಟ್‍ಪಾತ್ ಮೇಲೆ ಅನಾತ ಶವವಾಗಿ ಬಿದ್ದವನ ಪಾಡು. ಚಾರ್ಲಿ ಹೆಬ್ಡೋದಲ್ಲಿ ಉಗ್ರರು ದಾಳಿ ಮಾಡಿದಾಗ ಇಡೀ ವಿಶ್ವವೇ ಬಾಯಿ ಬಡಿದುಕೊಂಡಿತ್ತು. ಎಲ್ಲಿ ನೋಡಿದರೂ ಜನರು ಬೀದಿಗಿಳಿದು ಹೋರಾಟ ಮಾಡಿದ್ದರು. ಭಾರತದ ಕೆಲ ಪ್ರಸಿದ್ಧ ಪತ್ರಕರ್ತರು ಟ್ವಿಟ್ಟರ್‍ನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು #JeSuisCharlie ಎಂದು ಬದಲಾಯಿಸಿ ಇಡೀ ವಿಶ್ವವೇ ಚಾರ್ಲಿ ಹೆಬ್ಡೋ ಬಗ್ಗೆ ಮಾತನಾಡುವ ಹಾಗೆ ಮಾಡಿದರು. ಆದರೆ, ಇಲ್ಲೊಬ್ಬ ಅಪ್ರತಿಮ ಬರಹಗಾರ/ವಿಜ್ಞಾನಿ/ಎಂಜಿನಿಯರ್/ಶಿಕ್ಷಕ ಎಲ್ಲವೂ ಆಗಿರುವ ಅವಿಜಿತ್ ರಾಯ್ ಹೆಣವಾಗಿ ಬಿದ್ದಾಗ ಬಾಂಗ್ಲಾದೇಶದ ಒಂದೆರಡು ಸಂಘಟನೆಗಳು ಹೋರಾಟ ಮಾಡಿದವೇ ಹೊರತು ಯಾವ ಮಾಧ್ಯಮಗಳೂ ಮೊದಲಿಗೆ ಸಾವಿನ ಸುದ್ದಿಯನ್ನೂ ಪ್ರಕಟಿಸಲಿಲ್ಲ. ಮೂರು ದಿನಗಳ ನಂತರ ಎಚ್ಚೆತ್ತ ಕೆಲ ವಿದೇಶದ ಆಂಗ್ಲ ಮಾಧ್ಯಮಗಳು, ಕೇವಲ ಜಾಲತಾಣಗಳಲ್ಲಿ ಮಾತ್ರ ಡಾ.ಅವಿಜಿತ್ ರಾಯ್ ಸಾವಿನ ಬಗ್ಗೆ ಬರೆದರು. ಏಕೆ ಹೀಗೆ?? ಅವಿಜಿತ್ ರಾಯ್‍ಗೆ ಒಂದು ನ್ಯಾಯ ಚಾರ್ಲಿ ಹೆಬ್ಡೋ ಪತ್ರಕರ್ತರಿಗೊಂದು ನ್ಯಾಯವೇಕೆ? ಸತ್ತವನು ಹಿಂದೂ ಎಂಬ ಕಾರಣಕ್ಕೋ ಅಥವಾ ಆತ ಮುಸಲ್ಮಾನ ಹುಡುಗಿಯನ್ನು ಮದುವೆಯಾಗಿದ್ದ ಎಂಬ ಕಾರಣಕ್ಕೆ ಸುಮ್ಮನಿದ್ದರೋ? ಅವಿಜಿತ್ ರಾಯ್ ಮೂಲತಃ ಹಿಂದೂವಾಗಿದ್ದರೂ ಆತ ನಾಸ್ತಿಕನಾಗಿದ್ದ. ಅವಿಜಿತ್ ಸಹಜವಾಗಿಯೇ ಇಸ್ಲಾಮಿಕ್ ಉಗ್ರರು ಮತ್ತು ಮುಸಲ್ಮಾನರಿಂದ ಹೇಗೆ ಹಿಂದೂಗಳಿಗೆ/ಕ್ರಿಶ್ಚಿಯನ್ನರಿಗೆ/ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದು ಜನರ ಮನಮುಟ್ಟುವಂತೆ ಎಳೆಎಳೆಯಾಗಿ ಬರೆಯುತ್ತಿದ್ದ. ಇದನ್ನು ಸಹಿಸಲಾಗದ ಮುಸಲ್ಮಾನರು ಮತ್ತು ಉಗ್ರಗಾಮಿಗಳು, "ಅವಿಜಿತ್ ಈಗ ಅಮೆರಿಕದಲ್ಲಿದ್ದಾರೆ, ಹಾಗಾಗಿ ನಾವು ಆತನನ್ನು ಕೊಲ್ಲಲಾಗುತ್ತಿಲ್ಲ. ಅದರೆ, ಅವನು ಬಾಂಗ್ಲಾದೇಶಕ್ಕೆ ಬರಲೇಬೇಕು. ಬಂದಾಗ ಮಾತ್ರ ಆತ ವಾಪಸ್ ಹೋಗುವುದಿಲ್ಲ" ಎಂದು ಟ್ವಿಟ್ಟರ್ ಮತ್ತು ಮಾಧ್ಯಮಗಳಲ್ಲಿ ನೇರವಾಗಿ ಫಾತ್ವಾ ಹೊರಡಿಸಿದ್ದರು. ಇಷ್ಟಾದರು ಸಹ ಅವಿಜಿತ್‍ಗೆ ಯಾವ ಭದ್ರತೆಯನ್ನೂ ಕೊಟ್ಟಿರಲಿಲ್ಲ. ಆದರೆ, ತವರು ದೇಶವಾದ ಬಾಂಗ್ಲಾಗೆ ಬಂದಾಗ ಮಾತ್ರ ವಾಪಸ್ ಹೋಗಲೇ ಇಲ್ಲ. ಅವಿಜಿತ್, ಕೇವಲ ಇಸ್ಲಾಮ್ ಬಗ್ಗೆಯೋ ಅಥವಾ ಕ್ರಿಶ್ಚಿಯನ್ನರ ಬಗ್ಗೆಯೋ ಬರೆಯುತ್ತಿರಲಿಲ್ಲ. ಬದಲಿಗೆ ಹಿಂದೂ ಧರ್ಮದಲ್ಲಿನ ನ್ಯೂನತೆಗಳನ್ನೂ ತಮ್ಮ ಪ್ರಸಿದ್ಧ ಜಾಲತಾಣವಾದ "ಮುಕ್ತೊಮನೊ"ದಲ್ಲಿ ಸುವಿಸ್ತಾರವಾಗಿಯೇ ಬರೆಯುತ್ತಿದ್ದರು. ಅಮೆರಿಕದಲ್ಲಿದ್ದರೂ ಯಾವ ಹಿಂದೂಗಳು ಅಥವಾ ಕ್ರಿಶ್ಚಿಯನ್ನರೂ ಆತನ ಮೇಲೆ ದಾಳಿ ಮಾಡಲಿಲ್ಲ.

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ವಿವಿಧ ಧರ್ಮಗಳ ಬರಹಗಾರರ ಮೇಲೆ ಆಕ್ರಮಣವಾಗುತ್ತಿರುವುದು ಇದೇ ಮೊದಲಲ್ಲ, ಬಾಂಗ್ಲಾದೇಶದಲ್ಲಿ ಯಾರು ಬೆಂಗಾಲಿ ಭಾಷೆಗಾಗಿ ಹೋರಾಡಿತ್ತಾರೋ ಅವರಿಗೆಲ್ಲಾ ಇದೇ ಪರಿಸ್ಥಿತಿಯಾಗುತ್ತಿದೆ. ಅದು ಮುಸಲ್ಮಾನನಾಗಲಿ ಅಥವಾ ಹಿಂದೂವಾಗಲಿ. ಉರ್ದು ಹಾಗೂ ಇಸ್ಲಾಂ ವಿರುದ್ಧ ಮಾತನಾಡಿದರೆ ಅವನು ಹತ್ಯೆಗೀಡಾಗುವುದನ್ನು ಸ್ವತಃ ಯಮನೇ ಬಂದರೂ ತಪ್ಪಿಸಲಾಗುವುದಿಲ್ಲ. 2011ರಲ್ಲೇ ಮೃತಪಟ್ಟಿದ್ದ ಅನ್ವರ್ ಅಲ್ ಅವಲ್ಕಿಯೆಂಬ ಅಲ್ ಖೈದಾ ಉಗ್ರನಿಂದ ಪ್ರೇರೇಪಿತಗೊಂಡು ಹುಟ್ಟಿಕೊಂಡಿರುವ ಅನ್ಸರುಲ್ಲಾಹ್ ಬೆಂಗಾಲಿ ಎಂಬ ಉಗ್ರ ಸಂಘಟನೆ, 15 ಫೆಬ್ರವರಿ 2013 ಅಹಮ್ಮದ್ ರಜೀಬ್ ಹೈದರ್ ಎಂಬ ನಾಸ್ತಿಕ ಬರಹಗಾರನೊಬ್ಬನನ್ನು ಡಾಕಾದ ಮಿರ್‍ಪುರ್‍ನ ಅವನ ಮನೆಯ ಮುಂದೆಯೇ ಹತ್ಯೆ ಮಾಡಿತ್ತು. ಇಡೀ ರಸ್ತೆಯೇ ರಕ್ತಮಯವಾಗಿದ್ದರಿಂದ ಸ್ವತಃ ಅಹಮ್ಮದ್‍ನ ಸ್ನೇಹಿತರಿಗೇ, ಶವದ ಗುರುತು ಸಿಗದ ಹಾಗೆ ಹತ್ಯೆ ಮಾಡಲಾಗಿತ್ತು. ಆತ ಮಾಡಿದ ತಪ್ಪೇನೆಂದರೆ, ಬಾಂಗ್ಲಾದೇಶದಲ್ಲಿದ್ದ ಇಸ್ಲಾಮಿಕ್ ಉಗ್ರರನ್ನು "ಉಗ್ರರು" ಎಂದೇ ಕರೆದಿದ್ದು. ಒಮ್ಮೆ ಅಹಮ್ಮದ್, ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಬದುಕುಳಿಯುತ್ತಿದ್ದ ಎಂದು ಆತನ ಸ್ನೇಹಿತರೇ ಹೇಳಿಕೊಂಡು ಕಣ್ಣೀರಿಡುತ್ತಾರೆ. ಅವನ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಸುಮಾರು ಒಂದು ಲಕ್ಷಜನ ಬೀದಿಗಿಳಿದು ಹೋರಾಟ ಮಾಡಿದ್ದರು. ಪರಿಣಾಮ ಆತನ ಹತ್ಯೆ ಮಾಡಿದ್ದ ಐವರು ಉಗ್ರರೂ ಸಿಕ್ಕಿಹಾಕಿಕೊಂಡ ನಂತರವೂ ಯಾವ ಪ್ರಯೋಜನವೂ ಆಗಲಿಲ್ಲ. ಕಾರಣ, ಸಂಘಟನೆಯು ಫೇಸ್‍ಬುಕ್ಕಿನ್ನಲ್ಲಿ, "ನಮ್ಮ ಟಾರ್ಗೆಟ್ ಸತ್ತು ಬಿದ್ದಿದ್ದಾನೆ ಇನ್ನು ನಮ್ಮ ಧರ್ಮದ ವಿರುದ್ಧ ಮಾತಾಡುವವನು ಮುಸಲ್ಮಾನನೇ ಆಗಿರಲಿ, ಹಿಂದೂವೇ ಆಗಿರಲಿ, ಯಾರನ್ನೂ ಉಳಿಸುವುದಿಲ್ಲ" ಎಂದು ಪ್ರಕಟಿಸಿದ್ದರು. ಕೆಲ ದಿನಗಳ ನಂತರ ಅವರನ್ನೆಲ್ಲ "ಅಮಾಯಕರು" ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಡಾಕಾದಲ್ಲಿ ದೀಪೇಶ್ ಎಂಬ ವ್ಯಕ್ತಿ, ದೇಶದ ಮೂಲ ಬಾಷೆಯಾಗಿರುವ ಬೆಂಗಾಲಿ ಭಾಷೆಗೆ ಮಾನ್ಯತೆ ಕೊಡಬೇಕೆಂದು ಸಾಕಷ್ಟು ಬರೆಯುತ್ತಿದ್ದ. ಹೋರಾಟ ಮಾಡುತ್ತಿದ್ದ. ಪರಿಣಾಮ, ಅವನ ಮೇಲೆ ಬರೋಬ್ಬರಿ 8 ಬಾರಿ ಆಕ್ರಮಣವಾಗಿ ಕೂದಲೆಳೆಯಲ್ಲಿ ಜೀವ ಉಳಿಸಿಕೊಂಡಿದ್ದ. ಆದರೆ ಅದು ಬಹಳಷ್ಟು ದಿನ ನಡೆಯಲಿಲ್ಲ. ಸಾಮಾಜಿಕ ಹೋರಾಟಗಾರ ದೀಪೇಶ್ ಸಹ ಅವಿಜಿತ್ ಮಾದರಿಯಲ್ಲೇ ಕೊಲೆಯಾಗಿದ್ದ. ಉಗ್ರಗಾಮಿಗಳು ದೀಪೇಶ್‍ನನ್ನು ಆತನ ಮನೆಗೇ ನುಗ್ಗಿ ಹೊಡೆದು ಹಾಕಿದ್ದರು. ಎರಡು ದಿನಗಳ ನಂತರ ಎಲ್ಲರಿಗೂ ಗೊತ್ತಾಗಿದ್ದು ಆತನನ್ನು ಕೊಲೆ ಮಾಡಿದ್ದಾರೆ ಎಂದು. ಇನ್ನು 2004ರಲ್ಲಿ ಇದೇ ಮಾದರಿಯಲ್ಲಿ ಪ್ರಖ್ಯಾತ ವಾಗ್ಮಿ ಹಾಗೂ ಬರಹಗಾರನಾಗಿದ್ದ ಹುಮಾಯುನ್ ಆಝಾದ್ ಎಂಬುವನ ಹತ್ಯೆ ಮಾಡಿದ್ದರು.

ಅವಿಜಿತ್ ರಾಯ್, ಕೆಲ ದಿನಗಳ ಹಿಂದೆ ಬಿಸ್ವಾಶೆರ್ ವೈರಸ್(ನಂಬಿಕೆಯೆಂಬ ವೈರಸ್) ಎಂಬ ಪುಸ್ತಕ ಬರೆದಿದ್ದರು. ಅದರಲ್ಲಿ, ಹೊರ ಜಗತ್ತಿಗೆ ಚಾರ್ಲಿ ಹೆಬ್ಡೋ ದುರಂತ ಸೇರಿದಂತೆ ಇಸ್ಲಾಮಿಕ್ ಉಗ್ರರ ಅಸಲಿ ಮುಖವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದರು. ಪುಸ್ತಕದಲ್ಲಿ ಹಿಂದೂಗಳು ಅಥವಾ ಕ್ರಿಶ್ಚಿಯನ್ನರು ಹೊರತಾಗಿರಲಿಲ್ಲ. ಬಾಬ್ರಿ ಮಸೀದಿಯ ಸಮಸ್ಯೆ ಉದ್ಭವವಾಗಲು ಹಿಂದೂಗಳೇ ಕಾರಣ ಎಂದು ನೇರವಾಗಿ ಬರೆದಿದ್ದಾರೆ. ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ ನಡೆಯುವ ಪ್ರಸಿದ್ಧ ಪುಸ್ತಕ ಪರಿಷೆ ನಡೆಯುತ್ತದೆ. ಅಲ್ಲಿಗೆ ದೇಶ ವಿದೇಶಗಳಿಂದ ಜನರು ಬಂದು ಪುಸ್ತಕ ಖರೀದಿ ಮಾಡುತ್ತಾರೆ. ಸುಮಾರು 500 ಸ್ಟಾಲ್‍ಗಳಿರುವ ದೊಡ್ಡ ಪುಸ್ತಕ ಸಂತೆ. 2014ರ ಪುಸ್ತಕ ಸಂತೆಲ್ಲಿ ಅವಿಜಿತ್‍ರ ಪುಸ್ತಕಗಳನ್ನು ಇಡಲಾಗಿತ್ತು. ಬಿಸ್ವಾಶೆರ್ ವೈರಸ್ ಎಂಬ ಪುಸ್ತಕ ಸಂತೆಯಲ್ಲಿ ಜಿಲೇಬಿ ಮಾರಾಟವಾಗುವಂತೆ ಮಾರಾಟವಾಗುತ್ತಿತ್ತು. ಎಲ್ಲ ಮಳಿಗೆಯಲ್ಲೂ ಅವಿಜಿತ್‍ರ ಪುಸ್ತಕ ಖಾಲಿಯಾಗಿ ಜನರು ಪುಸ್ತದಂಗಡಿಯವನ ಜೊತೆ ಜಗಳಕ್ಕೆ ನಿಂತಾಗ ಮಾಲೀಕರು ಅವಿಜಿತ್‍ರನ್ನು ಮತ್ತೊಮ್ಮೆ ಪುಸ್ತಕ ಪ್ರಿಂಟ್ ಮಾಡಲು ಕೇಳಿಕೊಂಡಿದ್ದರು ಎಂದು ಪುಸ್ತಕದ ಪ್ರಕಾಶಕರಾದ, ಜಾಗೃತಿ ಪ್ರಕಾಶಿನಿಯವರು ಹೇಳುತ್ತಾರೆ. ಈ ಪುಸ್ತಕ ಹಿಂದೂಗಳಿಗೆ ಅಷ್ಟು ತಲೆಬಿಸಿಯಾಗದಿದ್ದರೂ, ಇಸ್ಲಾಮಿಕ್ ಉಗ್ರರ ನಿದ್ರೆಗೆಡಿಸಿತ್ತು. ಈ ಪುಸ್ತಕ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಅವಜಿತ್‍ರ ಇ-ಮೇಲ್‍ಗೆ ಕೊಲೆ ಬೆದರಿಕೆಗಳು ಬರತೊಡಗಿದವು. ಇದಾದ ನಂತರ, ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ಮಾಡುತ್ತಿದ್ದವರಿಗೂ ಬೆದರಿಕೆ ಬಂದ ಕಾರಣ ಅವರು ಮಾರಾಟವನ್ನೇ ಸ್ಥಗಿತಗೊಳಿಸಿದ್ದರು. ಬಾಂಗ್ಲಾದೇಶದ ಕುಖ್ಯಾತ ಉಗ್ರಗಾಮಿ ಫರಾಬಿ ಶಫೀಉರ್ ರೆಹ್‍ಮಾನ್, ಫೇಸ್‍ಬುಕ್ಕಿನಲ್ಲಿ ಮತ್ತು ಟ್ವಿಟ್ಟರ್‍ನಲ್ಲಿ ಯಾವುದಕ್ಕೂ ಕ್ಯಾರೆ ಎನ್ನದೇ "ನಿನ್ನನ್ನು ಕೊಲೆ ಮಾಡುವುದು ನಿಶ್ಚಿತ. ಅಮೆರಿಕದಲ್ಲಿ ಅಡಗಿ ಕುಳಿತುಕೊಂಡ್ಡಿದ್ದಕ್ಕೆ ಬದುಕಿದ್ದೀಯ. ಬಾಂಗ್ಲಾದೇಶಕ್ಕೆ ಬಾ.. ಮುಂದಿನದ್ದು ನಾವು ನೋಡಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದ ಎಂಬ ವಿಷಯವನ್ನು ಸ್ವತಃ ಡಾ.ಅವಜಿತ್ ರಾಯ್, ನ್ಯೂಯಾರ್ಕ್ ಮೂಲದ ಸೆಕ್ಯುಲರ್ ಹ್ಯುಮಾನಿಸಮ್ ಸಂಸ್ಥೆಯ "ಫ್ರೀ ಎಂಕ್ವೈರಿ" ಎಂಬ ನಿಯತಕಾಲಿಕೆಯಲ್ಲಿ "ದಿ ವೈರಸ್ ಆಫ್ ಫೇಯ್ತ್" ಎಂಬ ಅಂಕಣಲ್ಲಿ ಬರೆದುಕೊಂಡೊದ್ದ.

ಇದಕ್ಕೆ ಸರಿಯಾಗಿ ಬಾಂಗ್ಲಾದೇಶ ಸರ್ಕಾರ ಮತ್ತು ನ್ಯಾಯಾಲಯ ಸಹ ಉಗ್ರಗಾಮಿಗಳಿಗೆ ದೇಶವನ್ನು ಇಸ್ಲಾಮಿಕರಣ ಮಾಡಲು ಬೆಂಬಲ ನೀಡುತ್ತಿದೆಯೆನ್ನುವುದಕ್ಕೆ ಮತ್ತೊಂದು ಸಾಕ್ಷಿ ಕೊಡುತ್ತೇನೆ ಕೇಳಿ. ಅಹಮ್ಮದ್ ರಜೀಬ್‍ನ ಕೊಲೆಯಾದಾಗ, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಇದೇ ಫರಾಬಿ ಶಫೀಉರ್ ಎಂಬ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಸರ್ಕಾರವೂ ಈತನ ಪರ ಮಾತನಾಡಿ, ಅಧಿಕಾರ ಬಲದಿಂದ "ಫರಾಬಿ ಒಬ್ಬ ಅಮಾಯಕ" ಎಂದು ಬಿಡುಗಡೆ ಮಾಡಿತ್ತು. ಈಗ ಅದೇ ಫರಾಬಿ, ಅವಿಜಿತ್ ಹತ್ಯೆಯ ನಂತರ ದುಬೈಗೆ ಹಾರುವ ತಯಾರಿ ನಡೆಸಿದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಘಟನೆಯಿಂದ ಮಾತಾಡುವಷ್ಟು ಚೇತರಿಸಿಕೊಂಡಿರುವ ಅವಿಜಿತ್ ಪತ್ನಿ ರಫಿದಾ, ನಾನು ನನ್ನ ಪತಿಯ ಹಾದಿಯನ್ನು ಮೊದಲಿನಿಂದಲೂ ಅನುಸರಿಸುತ್ತಾ ಬಂದಿದ್ದೇನೆ. ಕೆಲವು ಉಗ್ರರು ನನ್ನ ಪತಿಯನ್ನು ಕೊಂದಿರಬಹುದು. ಆದರೆ, ನಾನು ಯಾವತ್ತೂ ಹಿಂಜರಿಯುವುದಿಲ್ಲ ಎಂದು ನೇರವಾಗಿಯೇ ಉಗ್ರರಿಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ. ಅಸಲಿಗೆ ಬಾಂಗ್ಲಾದೇಶದಲ್ಲಿನ ವಾಸ್ತವವಿದು. ಜಾತ್ಯಾತೀತತೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬರುವ ಯಾವ ಪಕ್ಷವೂ ಜಾತ್ಯಾತೀತವಲ್ಲ. ಬಾಂಗ್ಲಾದೇಶವನ್ನು ಮತ್ತೊಂದು ಪಾಕಿಸ್ತಾನ್ ಮಾಡಬೇಕೆಂಬುದೇ ಅಲ್ಲಿನ ರಾಜಕಾರಣಿಗಳ ಗುರಿ. ಅಲ್ಲಿದ್ದ ಪ್ರತಿಯೊಬ್ಬರೂ ಷರಿಯಾ ಕಾನೂನಿಗಾಗಿ ಕಾಯುತ್ತಿದ್ದಾರೆ. ಅಲ್ಲಿದ್ದ ಹಿಂದೂಗಳು ಇದನ್ನು ವಿರೋಧಿಸಿದ್ದಕ್ಕೆ, ಅನುಮಾನಾಸ್ಪದವಾಗಿ ಕಾಣೆಯಗುತ್ತಿದ್ದಾರೆ. ಕೆಲವು ವರ್ಷಗಳಿಂದ 49 ಮಿಲಿಯನ್ ಹಿಂದೂಗಳು ಬಾಂಗ್ಲಾದೇಶದಿಂದ ಕಾಣೆಯಾಗಿದ್ದಾರೆ ಎಂದು 2011ರ ಅಮೆರಿಕದ ಸದನದಲ್ಲಿ ಸದಸ್ಯನೊಬ್ಬ ಹೇಳಿದ್ದ. ಇದಕ್ಕಿಂತಲೂ ಇನ್ನೇನು ಸಾಕ್ಷಿ ಬೇಕು? ಬಾಂಗ್ಲಾದೇಶದಲ್ಲಿನ ಹಿಂದೂಗಳು ಅನುಮಾನಾಸ್ಪದವಾಗಿ ಕಾಣೆಯಾಗಿರುವ ವಿಷಯ ಅಮೆರಿಕಕ್ಕೆ ಮುಟ್ಟಿರಬೇಕಾದರೆ, ಬಾಂಗ್ಲಾದೇಶ ಸರ್ಕಾರಕ್ಕೆ ಇದರ ಬಗ್ಗೆ ಗೊತ್ತೇ ಇಲ್ಲ ಎಂದರು ನಂಬುವ ದಡ್ಡರು ಇಲ್ಲಿ ಯಾರೂ ಇಲ್ಲ. ಬಾಂಗ್ಲಾದೇಶದಲ್ಲಿ ಯಾವತ್ತಿಗೂ ಮುಕ್ತ ಚಿಂತಕರಿಗೆ, ಜಾತ್ಯಾತೀತವಾದಿಗಳಿಗೆ ಬೆಲೆಯೇ ಇಲ್ಲವೆಂಬದು ಲೇಖಕ, ವಿಜ್ಞಾನಿ ಡಾ.ಅವಿಜಿತ್ ರಾಯ್ ಹತ್ಯೆ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಯಾವುದೇ ದೇಶವಾಗಲಿ, ಧರ್ಮಂಧರ ಕೈಯ್ಯಲ್ಲಿ ಸಿಕ್ಕರೆ ದೇಶವು ಒಡೆದು ದಿಕ್ಕಾಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅರಿಸ್ಟಾಟಲ್ ಹೇಳಿದ್ದರು, ಧರ್ಮ ಅಫೀಮು ಇದ್ದ ಹಾಗೆ. ಅದರ ಹಿಂದೆ ಬಿದ್ದವರನ್ನು ಖಂಡಿತವಾಗಿಯೂ ಅರಿವಿಗೆ ಬರದಂತೆಯೇ ನಾಶ ಮಾಡುತ್ತದೆ ಎಂದು. ಧರ್ಮವೆಂಬ ಚಟ ಹತ್ತಿಸಿಕೊಂಡ ಬಾಂಗ್ಲಾದೇಶ, ಕೊನೆಗೆ ಮುಸಲ್ಮಾನರನ್ನೂ ಬಿಡಲಿಲ್ಲ. ಇದಕ್ಕೆ ಉದಾಹರಣೆಯಾಗಿ ಪಾಕಿಸ್ತಾನವನ್ನೇ ನೋಡಿ, ಪೇಶಾವರದಲ್ಲಿ ಯಾವುದೋ ಹಿಂದೂ ಮಕ್ಕಳು ಪ್ರಾಣ ತೆತ್ತಿಲ್ಲ. ಬದಲಿಗೆ 132 ಮುಸಲ್ಮಾನ ಮಕ್ಕಳೇ ಅಸುನೀಗಿದ್ದಾರೆ. ನಿಮಗೆ ತಿಳಿದಿರಲಿ, ಪೇಶಾವರದ ಮಕ್ಕಳಿಗೆ ತಮ್ಮ ಪುಸ್ತಕದಲ್ಲಿ "ಭಾರತ ಖಾಫಿರ್‍ಗಳ ರಾಷ್ಟ್ರವೆಂದೇ ಪಾಠ ಹೇಳೊಕೊಡಲಾಗುತ್ತಿತ್ತು." ಏನೂ ಅರಿಯದ ಮಕ್ಕಳಿಗೆ ವಿಷ ಬೀಜ ಬಿತ್ತಿದರ ಪರಿಣಾಮ, ಇಂದು ಪಾಕಿಸ್ತಾನದಲ್ಲಿ ಉಗ್ರರ ಹಾವಳಿ ಹೆಚ್ಚಾಗಿ ಮಹಿಳೆಯರು ಮಕ್ಕಳು ಎಂಬುದನ್ನೂ ನೋಡದೇ ಕೊಲ್ಲುತ್ತಿದ್ದಾರೆ. ಇನ್ನು ಶಿಯಾ ಸುನ್ನಿಗಳ ಜಗಳ ಇಡೀ ಪ್ರಪಂಚಕ್ಕೇ ಗೊತ್ತು. ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಭಾರತ ಎಲ್ಲೋ ಇಂಥ ಹಾದಿಯನ್ನು ತಲುಪುತ್ತಿದೆಯೇನೋ ಎಂಬ ಅನುಮಾನ ಕಾಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಎಲ್ಲ ಧರ್ಮಗಳ ಮುಖ ನೋಡದೆ, ಒಟ್ಟಾಗಿ ಹೋರಾಡಿದರೋ ಹಾಗೆಯೇ ಭಾರತ ಈಗಲೂ ಬದುಕಬೇಕಿದೆ. ಇಲ್ಲದಿದ್ದರೆ, ಇಂದು ಬಾಂಗ್ಲಾದೇಶದ ಅವಿಜಿತ್ ರಾಯ್ ನಾಳೆ ಭಾರತದ ಯಾರಾಗುತ್ತಾರೋ ಗೊತ್ತಿಲ್ಲ. ಬಾಂಗ್ಲಾದೇಶದಿಂದ ಭಾರತ ಪಾಠ ಕಲಿಯಬೇಕಿದೆ.
    -ಚಿರಂಜೀವಿ ಭಟ್
eMail: mechirubhat@gmail.com
www.chirubhat.in
www.ankanaangala.blogspot.in

No comments:

Post a Comment