Friday, 19 September 2014

ಸಮಾಧಿ ಸ್ಥಿತಿಯಲ್ಲಿರುವಾಗ ಸಾವೂ ನಮ್ಮನ್ನು ಹಿಡಿಯಲಾರದು!

ಸಮಾಧಿ ಸ್ಥಿತಿಯಲ್ಲಿರುವಾಗ ಸಾವೂ ನಮ್ಮನ್ನು ಹಿಡಿಯಲಾರದು!

ಪಾಲ್‌ ಬ್ರಂಟನ್‌, ಬ್ರಿಟಿಷ್‌ ತತ್ವಜ್ಞಾನಿ

ಮನುಷ್ಯ ಸಮಾಧಿ ಸ್ಥಿತಿಯನ್ನು ಸಾಧಿಸಿದಾಗ ಹೃದಯ ಬಡಿಯುವುದಿಲ್ಲ. ರಕ್ತ ಸಂಚಲನೆ ನಿಂತುಹೋಗಿರುತ್ತದೆ. ನೋಡಿದವರು ಅವರು ಸತ್ತಿದ್ದಾರೆ ಎಂದೇ ಭಾವಿಸುತ್ತಾರೆ. ಆದರೆ ಅವರೂ ನಮ್ಮನಿಮ್ಮಷ್ಟೇ ಪ್ರಜ್ಞೆಯಿಂದಿರುತ್ತಾರೆ. ಅವರ ಮನಸ್ಸು ಮತ್ತು ದೇಹ ತಮ್ಮ ಮಿತಿಗಳನ್ನು ಮೀರಿ ಹೋಗಿರುತ್ತದೆ. ಇಡೀ ವಿಶ್ವವೇ ಅವರೊಳಗಿರುವಂತಿರುತ್ತದೆ. ಒಂದು ದಿನ ಅವರು ತಮ್ಮ ಸಮಾಧಿಯಿಂದ ಹೊರಬರುತ್ತಾರೆ. ಅಷ್ಟೊತ್ತಿಗೆ ಎಷ್ಟೋ ಶತಮಾನ ಕಳೆದಿರುತ್ತದೆ.

ಪ್ರತಿದಿನ ಸಂಜೆ ನಾನು ಕಾಶಿಯ ಒಬ್ಬ ಜ್ಯೋತಿಷಿ ಮನೆಗೆ ಹೋಗುತ್ತಿದ್ದೆ. ಅದೊಂದು ಕಲ್ಲಿನ ಮನೆ. ಅಲ್ಲಿ ಅವರು ನನಗೆ ಬ್ರಹ್ಮಚಿಂತನೆಯ ಪಾಠ ಹೇಳುತ್ತಿದ್ದರು. ಮನೆಯಲ್ಲಿದ್ದ ಮಬ್ಟಾದ ದೀಪ ಅವರ ಮುಖದ ಮೇಲೆ ವಿಚಿತ್ರ ನಮೂನೆಗಳನ್ನು ಸೃಷ್ಟಿಸುವಾಗ ನನಗೆ ಪ್ರಾಚೀನ ಟಿಬೆಟ್ಟಿನ ಯೋಗಪದ್ಧತಿಯ ಪಾಠವಾಗುತ್ತಿತ್ತು. ಆತ ಯಾವತ್ತೂ ಆಧ್ಯಾತ್ಮಿಕ ದೊಡ್ಡಸ್ತಿಕೆ ಅಥವಾ ಗರ್ವಿಷ್ಠ ಅಧ್ಯಾಪಕರ ಹಾಗೆ ತೋರಿಸಿಕೊಳ್ಳದೆ ನಮ್ರತೆಯೇ ಜೀವ ತಳೆದಂತಿದ್ದರು. ತಮ್ಮ ಪ್ರತಿ ಮಾತನ್ನೂ "ಬ್ರಹ್ಮಚಿಂತನೆಯ ಈ ಬೋಧನೆಯಲ್ಲಿ ಏನನ್ನು ಹೇಳಲಾಗಿದೆ ಎಂದರೆ...' ಎಂದೇ ಪ್ರಾರಂಭಿಸುತ್ತಿದ್ದರು.

"ಈ ಬ್ರಹ್ಮಚಿಂತನ ಯೋಗದ ಅಂತಿಮ ಗುರಿ ಏನು?' ಎಂದು ಅವರಲ್ಲಿ ಕೇಳಿದ್ದೆ.

"ಅದರಲ್ಲಿ ನಾವು ಪವಿತ್ರ ಸಮಾಧಿಯ ಸ್ಥಿತಿ ಅರಸುತ್ತೇವೆ. ಏಕೆಂದರೆ ಆ ಸ್ಥಿತಿಯಲ್ಲಿ ಮಾತ್ರ ಮನುಷ್ಯನಿಗೆ ತಾನು "ಆತ್ಮ' ಎಂಬುದಕ್ಕೆ ಸರಿಯಾದ ಪ್ರಮಾಣ ಸಿಗುತ್ತದೆ. ಆಗ ಅವನು ತನ್ನ ಸುತ್ತಲ ಪರಿಸರದಿಂದ ಮನಸ್ಸನ್ನು ಪ್ರತ್ಯೇಕಿಸುತ್ತಾನೆ. ವಿಷಯಗಳು ಅಳಿದುಹೋಗುತ್ತವೆ. ಬಹಿರಂಗದ ಪ್ರಪಂಚವೂ ಮಾಯವಾಗುವಂತೆ ಕಂಡುಬರುತ್ತದೆ. ವ್ಯಕ್ತಿಗೆ ಆತ್ಮವು ತನ್ನೊಳಗೆ ಜೀವಿಸುತ್ತಿರುವ ನಿಜವಾದ ವಸ್ತು ಎನ್ನಿಸುತ್ತದೆ. ಆತ್ಮದ ಪರಮಾನಂದದ ಸ್ಥಿತಿ, ಶಾಂತಿ ಮತ್ತು ಶಕ್ತಿಗಳು ಅವನನ್ನು ಆವರಿಸಿಕೊಳ್ಳುತ್ತವೆ. ಅವನಿಗೆ ಬೇಕಾಗಿರುವುದೆಲ್ಲ ಈ ರೀತಿಯ ಒಂದು ಅನುಭವ ಮಾತ್ರ. ಏಕೆಂದರೆ ತನ್ನಲ್ಲಿ ಅಂಥದ್ದೊಂದು ದಿವ್ಯವಾದ ಹಾಗೂ ನಂದದ ಜೀವ ಇದೆ ಎಂಬುದಕ್ಕೆ ಅದೊಂದು ಸಾಕ್ಷಿ. ಅದನ್ನು ಅವನು ಎಂದಿಗೂ ಮರೆಯಲಾರನು.'

ಆಗ ನನ್ನಲ್ಲೊಂದು ಅನುಮಾನ ಹುಟ್ಟಿತು. "ಇವೆಲ್ಲವೂ ಒಂದು ರೀತಿಯ ಗಹನವಾದ ಸ್ವಭಾವಪ್ರೇರಣೆಯೇನೋ ಎನ್ನಿಸಿದೆ ನನಗೆ. ನೀವು ಅಲ್ಲ ಎನ್ನುತ್ತೀರಾ?' ಎಂದು ಕೇಳದೆ.

ಮುಗುಳ್ನಕ್ಕರು. "ತಾಯಿ ಮಗುವಿಗೆ ಜನ್ಮವಿತ್ತಾಗ, ಏನಾಗುತ್ತಿದೆ ಎಂಬುದರ ಬಗ್ಗೆ ಒಂದು ಕ್ಷಣಕ್ಕಾದರೂ ಅನುಮಾನ ಪಡಲು ಸಾಧ್ಯವೇ? ಹಾಗೆ ಆಕೆ ತನ್ನ ಆ ಅನುಭವವನ್ನು ಸ್ಮರಿಸಿಕೊಂಡಾಗ ಅದು ಕೇವಲ ಸ್ವಪ್ರೇರಣೆ ಎಂದುಕೊಳ್ಳಲು ಸಾಧ್ಯವೇ? ಆ ಮಗು ತನ್ನ ಜೊತೆಯಲ್ಲಿ ವರ್ಷಗಳನ್ನು ಕಳೆಯುತ್ತಾ ಬೆಳೆಯುತ್ತಿರುವಾಗ ಅವಳು ಯಾವಾಗಲಾದರೂ ಮಗುವಿನ ಅಸ್ತಿತ್ವದ ಬಗ್ಗೆ ಅನುಮಾನ ಪಡಲು ಸಾಧ್ಯವೇ? ಅದೇ ರೀತಿಯಲ್ಲಿ ಆಧ್ಯಾತ್ಮಿಕ ಪುನರ್ಜನ್ಮದ ಕಾರ್ಯವೂ ಒಬ್ಬರ ಜೀವನದಲ್ಲಿ ಉಂಟಾಗುವ ಅದ್ಭುತ ಘಟನೆ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಅದು ವ್ಯಕ್ತಿತ್ವವನ್ನೇ ಬದಲಾಯಿಸುತ್ತದೆ. ವ್ಯಕ್ತಿಯು ಪವಿತ್ರವಾದ ಸಮಾಧಿ ಸ್ಥಿತಿ ಪಡೆದಾಗ ಮನಸ್ಸಿನೊಳಗೆ ಒಂದು ರೀತಿಯ ಶೂನ್ಯಪ್ರಜ್ಞೆ ಉಂಟಾಗುತ್ತದೆ. ನೀನು ಭಗವಂತ ಎಂಬ ಪದಕ್ಕೆ ಅಷ್ಟು ಮರ್ಯಾದೆ ನೀಡದವನಾಗಿರುವುದರಿಂದ ಅದನ್ನು ಆತ್ಮ ಎನ್ನೋಣವೇ? ಅದು ಉನ್ನತ ಶಕ್ತಿಯಾಗಿದ್ದು, ಮನಸ್ಸಿನ ಶೂನ್ಯವನ್ನು ಮುಚ್ಚುತ್ತದೆ. ಆಗ ಅಪಾರ ಆನಂದದ ಅನುಭವದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಇಡೀ ಸೃಷ್ಟಿಯ ಬಗ್ಗೆ ಅಪಾರ ಪ್ರೀತಿ ಹುಟ್ಟುತ್ತದೆ. ದೇಹವು, ನೋಡಿದವರಿಗೆ ಜ್ಞಾನವಿಲ್ಲದ್ದರಂತೆ ಅಥವಾ ಸತ್ತಂತೆ ಕಂಡುಬಂದರೂ ಸರಿಯೇ, ಏಕೆಂದರೆ ಆ ಅಂತಿಮ ಸ್ಥಿತಿ ತಲುಪಿದಾಗ ಉಸಿರಾಟ ನಿಂತೇ ಹೋಗಿರುತ್ತದೆ.'

"ಹಾಗಾದರೆ ಅದು ಭಯಂಕರವಲ್ಲವೇ?'

"ಅಲ್ಲ. ಪೂರ್ಣ ಏಕಾಂತದಲ್ಲಿ ಸಮಾಧಿಸ್ಥಿತಿ ಪಡೆಯಬಹುದು. ಅಥವಾ ಸ್ನೇಹಿತನೊಬ್ಬನನ್ನು ಕೂಡಿಸಿಕೊಂಡು, ನೋಡಿಕೊಳ್ಳುವಂತೆ ಹೇಳಬಹುದು. ನಾನು ಎಷ್ಟೋ ಸಲ ಸಮಾಧಿಸ್ಥಿತಿಗೆ ಹೋಗಿ, ಇಷ್ಟಬಂದಾಗ ಆಚೆ ಬರುತ್ತೇನೆ. ನಾನು ಸಾಮಾನ್ಯವಾಗಿ ಎರಡು ಅಥವಾ ಮೂರು ತಾಸು ಆ ಸ್ಥಿತಿಯಲ್ಲಿರುತ್ತೇನೆ. ನನ್ನ ಧ್ಯಾನದ ಸ್ಥಿತಿ ಮುಗಿಯುವ ಸಮಯವನ್ನು ಕೂಡ ಮೊದಲೇ ನಿರ್ಧರಿಸಿರುತ್ತೇನೆ. ಅದೊಂದು ಅದ್ಭುತ ಅನುಭವ. ಏಕೆಂದರೆ ವಿಶ್ವದಲ್ಲಿ ನಾನು ಕಾಣುವ ಎಲ್ಲವೂ ನನ್ನೊಳಗೆ ಕಾಣುತ್ತವೆ. ಆದ್ದರಿಂದಲೇ ನೀವು ಕಲಿಯಬೇಕೆಂದಿರುವುದೆಲ್ಲವನ್ನೂ ನಿಮ್ಮ ಆಂತರ್ಯದಿಂದಲೇ ಕಲಿಯಬಹುದು ಎಂದು ನಾನು ಹೇಳುವುದು.

ನಿಮಗೆ ನಾನು ಬ್ರಹ್ಮಚಿಂತನ ಯೋಗದ ಬಗ್ಗೆ ಪೂರ್ಣವಾಗಿ ಕಲಿಸಿದ ನಂತರ ಬೇರೆ ಯಾವ ಗುರುವಿನ ಅವಶ್ಯಕತೆಯೂ ಇರುವುದಿಲ್ಲ. ನಿಮಗೆ ಬಾಹ್ಯ ಮಾರ್ಗದರ್ಶನದ ಅವಶ್ಯಕತೆಯೂ ಇರುವುದಿಲ್ಲ.'
"ಹಾಗಾದರೆ ನಿಮಗೆ ಯಾರೂ ಗುರುಗಳೇ ಇರಲಿಲ್ಲವೇ?'

"ಇಲ್ಲ. ನಾನು ಬ್ರಹ್ಮಚಿಂತನದ ಗುಟ್ಟು ಅರಿತ ನಂತರ ಎಂದೂ ಹಿಂದಿರುಗಿ ನೋಡಿಲ್ಲ. ಎಷ್ಟೋ ಸಲ ನನ್ನಲ್ಲಿಗೆ ಹಿರಿಯ ಗುರುಗಳು ಬಂದಿದ್ದರು. ನಾನು ಪವಿತ್ರ ಸ್ಥಿತಿಯನ್ನು ಪಡೆದುಕೊಂಡ ನಂತರ ಮತ್ತು ಒಳ ಪ್ರಪಂಚದ ಅರಿವನ್ನು ಮೂಡಿಸಿಕೊಂಡ ನಂತರ ನಡೆದಿರುವುದಿದು. ಹಿರಿಯ ಮುನಿಗಳು ತಮ್ಮ ಮಾನಸಿಕ ರೂಪಗಳಲ್ಲಿ ನನಗೆ ಕಾಣಿಸಿಕೊಂಡಿದ್ದಾರೆ. ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸಿದ್ದಾರೆ. ಆದ್ದರಿಂದ ನಿಮಗೂ ನಾನು ಹೇಳುವುದಿಷ್ಟೆ: ನಿಮ್ಮ ಸ್ವಂತ ಆತ್ಮದ ಮಾರ್ಗದರ್ಶನದ ಬಗ್ಗೆ ನಂಬಿಕೆಯಿಟ್ಟುಕೊಳ್ಳಿ. ಗುರುಗಳು ಆಂತರಿಕ ಪ್ರಪಂಚದಲ್ಲಿ ನಿಮ್ಮ ಬಳಿಗೆ ತಾವಾಗಿಯೇ ಬರುತ್ತಾರೆ.'

ಎರಡು ನಿಮಿಷ ಅಸಾಧ್ಯ ಮೌನ. ನಂತರ "ಒಮ್ಮೆ ನಾನು ಆ ಸ್ಥಿತಿಯಲ್ಲಿ ಜೀಸಸ್‌ನನ್ನೂ ಕಂಡಿದ್ದೆ' ಎಂದರು.
ನನಗೆ ಅಚ್ಚರಿಯಾಯಿತು. ಆದರೆ ಅವರು ವಿವರಣೆ ನೀಡುವ ಗೋಜಿಗೆ ಹೋಗಲಿಲ್ಲ. ಬದಲಿಗೆ ತಮ್ಮ ಕಣ್ಣುಗುಡ್ಡೆಗಳ ಬಿಳುಪನ್ನು ವಿಚಿತ್ರವಾದ ರೀತಿಯಲ್ಲಿ ಸುತ್ತುವಂತೆ ಮಾಡಿದರು. ನಂತರ ಕೆಲ ಕ್ಷಣ ಮತ್ತೆ ಮೌನ. ಕೊನೆಗೆ ಅವರು ತಮ್ಮ ಕಣ್ಣುಗಳನ್ನು ಮೊದಲ ಸ್ಥಿತಿಗೆ ತಂದು ನಿಲ್ಲಿಸಿದಾಗಲೇ ನನಗೆ ನಂಬಿಕೆ ಬಂದಿದ್ದು.

ಗುರುಗಳು ಹೇಳಿದರು, "ಮನುಷ್ಯ ಆ ಸ್ಥಿತಿಯಲ್ಲಿರುವಾಗ ಸಾವೂ ಅವನನ್ನು ಹಿಡಿಯಲಾರದು. ಟಿಬೆಟ್ಟಿನ ಪಕ್ಕದಲ್ಲಿರುವ ಕೆಲ ಯೋಗಿಗಳು ಈ ಬ್ರಹ್ಮಚಿಂತನೆಯ ಪಥದಲ್ಲಿ ಪೂರ್ಣತೆ ಸಾಧಿಸಿದ್ದಾರೆ. ಹಾಗೆ ಮಾಡುವುದು ಅವರಿಗೆ ತೃಪ್ತಿ ನೀಡುವುದರಿಂದ ಅವರು ಹಿಮಾಲಯದ ಗವಿಗಳಲ್ಲಿ ಏಕಾಂತದಲ್ಲಿದ್ದುಕೊಂಡು ಧ್ಯಾನ ಮಾಡಿ ಅತ್ಯುನ್ನತ ಸ್ತರಕ್ಕೇರುತ್ತಾರೆ. ಆ ಸ್ಥಿತಿಯಲ್ಲಿ ನಾಡಿಮಿಡಿತ ಸ್ಥಗಿತಗೊಳ್ಳುತ್ತದೆ. ಹೃದಯ ಬಡಿಯುವುದಿಲ್ಲ. ರಕ್ತ ಸಂಚಲನೆ ನಿಂತುಹೋಗಿರುತ್ತದೆ. ನೋಡಿದವರು ಅವರು ಸತ್ತಿದ್ದಾರೆ ಎಂದೇ ಭಾವಿಸುತ್ತಾರೆ. ಅವರು ಒಂದು ರೀತಿಯ ನಿದ್ದೆಯಲ್ಲಿರುತ್ತಾರೆ ಎಂದುಕೊಳ್ಳಬೇಡಿ. ಏಕೆಂದರೆ ಅವರೂ ನಮ್ಮನಿಮ್ಮಷ್ಟೇ ಪ್ರಜ್ಞೆಯಿಂದಿರುತ್ತಾರೆ. ಅವರು ಒಳಪ್ರಪಂಚವನ್ನು ಹೊಕ್ಕಿದ್ದು, ಉನ್ನತ ಜೀವನವನ್ನು ಜೀವಿಸುತ್ತಿರುತ್ತಾರೆ. ಅವರ ಮನಸ್ಸು ಮತ್ತು ದೇಹ ತಮ್ಮ ಮಿತಿಗಳನ್ನು ಮೀರಿ ಹೋಗಿರುತ್ತದೆ. ಇಡೀ ವಿಶ್ವವೇ ಅವರೊಳಗಿರುವಂತಿರುತ್ತದೆ ಅವರ ಅನುಭವ. ಒಂದು ದಿನ ಅವರು ತಮ್ಮ ಸಮಾಧಿಯಿಂದ ಹೊರಬಂದು ನಿಲ್ಲುತ್ತಾರೆ. ಆದರೆ ಅಷ್ಟೊತ್ತಿಗೆ ಅವರ ವಯಸ್ಸು ಎಷ್ಟೋ ಶತಮಾನಗಳನ್ನು ಕಳೆದಿರುತ್ತದೆ.'
ನಾನೊಮ್ಮೆ ಈ ದೀರ್ಘ‌ಜೀವಿತದ ವಿಸ್ಮಯದ ಬಗ್ಗೆ ಕೇಳಿದೆ. ಈ ಪೂರ್ವದ ಸೂರ್ಯನ ಕೆಳಗೆ ನಾನು ಎಲ್ಲೆಲ್ಲಿ ಸುತ್ತಾಡುವೆನೋ ಅಲ್ಲೆಲ್ಲ ಈ ಪ್ರಶ್ನೆ ಕೇಳಿಬರುತ್ತದೆ. ಆದರೆ ನಾನು ಈ ರೀತಿಯ ಪೌರಾಣಿಕ ವ್ಯಕ್ತಿಗಳಲ್ಲಿ ಒಬ್ಬರನ್ನಾದರೂ ಹುಡುಕಿ ಅವರನ್ನು ನೋಡಲು ಸಾಧ್ಯವಾಗುವುದೇ? ಟಿಬೆಟ್ಟಿನ ಉತ್ಸಾಹಶೂನ್ಯ ವಾತಾವರಣದಲ್ಲಿ ಆಶ್ರಯ ಪಡೆದಿರುವ ಈ ಪುರಾತನ ಪ್ರಭಾವವನ್ನು ಪಾಶ್ಚಾತ್ಯರು ಎಂದಾದರೂ ಪರಿಶೋಧಿಸಿ ಅದನ್ನೊಂದು ವೈಜ್ಞಾನಿಕ ಹಾಗೂ ಮಾನಸಿಕ ಸತ್ಯ ಎಂದು ನಂಬಬಹುದೇ? ಯಾರಿಗೆ ಗೊತ್ತು!

(ನಾಡಿದ್ದು    ರವಿವಾರ ಬೆಂಗಳೂರಿನ ಕೇಶವಶಿಲ್ಪದಲ್ಲಿ ಬೆಳಗ್ಗೆ 10.30ಕ್ಕೆ ಬಿಡುಗಡೆಯಾಗಲಿರುವ "ನಿಗೂಢ ಭಾರತದಲ್ಲೊಂದು ಹುಡುಕಾಟ' ಪುಸ್ತಕದ ಆಯ್ದ ಭಾಗವಿದು. ಪಾಲ್‌ ಬ್ರಂಟನ್‌ ಬರೆದ "ಎ ಸರ್ಚ್‌ ಇನ್‌ ಸೀಕ್ರೆಟ್‌ ಇಂಡಿಯಾ' ಎಂಬ ಈ ಪುಸ್ತಕವನ್ನು ಗಿರಿಜಾ ಶಾಸ್ತ್ರಿ ಕನ್ನಡಕ್ಕೆ ತಂದಿದ್ದಾರೆ)

Source :
Udayavani